ದಿನತಂತಿ
ಒಂದು ತಮಿಳು ದಿನಪತ್ರಿಕೆ. ಮಧುರೈಯಲ್ಲಿ 1942ರಿಂದ ಪ್ರಾರಂಭವಾಯಿತು. ಅನತಿ ಕಾಲದಲ್ಲೇ ಸಾಕಷ್ಟು ಹೆಸರು ಗಳಿಸಿತು. ಜನ ಸಾಮಾನ್ಯರನ್ನು ಆಕರ್ಷಿಸಿತು. ಕ್ರಮೇಣ ಮದರಾಸು, ಕೊಯಮತ್ತೂರು, ಸೇಲಂ ಮತ್ತು ತಿರುಚಿರಾಪ್ಪಳ್ಳಿಗಳಿಂದ ಏಕಕಾಲದಲ್ಲಿ ಪ್ರಕಟವಾಗತೊಡಗಿತು. ಜನಪ್ರಿಯತೆಯಲ್ಲಿ ಅದು ತನ್ನ ಪರಮುಖ ಸ್ಪರ್ಧಿಗಳಾದ ದಿನಮಣಿ ಮತ್ತು ಸ್ವದೇಶಮಿತ್ರನ್ ಎರಡನ್ನೂ ಹಿಂದೆ ಹಾಕಿತು. ಪ್ರಸಾರ ಗಣನೀಯವಾಗಿ ಏರಿತು. ಮುಂದೆ ಮದರಾಸು ಮತ್ತು ಮಧುರೈ ಆವೃತ್ತಿಗಳು ಮಾತ್ರ ಉಳಿದುಕೊಂಡವು. ಎಲ್ಲ ಆವೃತ್ತಿಗಳೂ ಮುಖ್ಯ ಸಂಪಾದಕರಾಗಿದ್ದವರು ಟಿ. ಆರ್. ಭೀಮಸಿಂಗ್. ತಂತಿ ಈಗ ಚೆನ್ನೈ, ಮಧುರೈ, ಕೊಯಮತ್ತೂರು, ತಿರುಚಿರಾಪ್ಪಳ್ಳಿ, ತಿರುನೆಲ್ವೇಲಿ, ವೆಲ್ಲೂರು ದಿಂಡಿಗಲ್, ತಂಜಾವೂರು, ಈರೋಡ್, ಸೇಲಂ, ನಾಗರಕೊಯಿಲ್, ಕಡಲೂರು, ಪಾಂಡಿಚೆರಿ ಮತ್ತು ಬೆಂಗಳೂರು - ಈ ಹದಿನಾಲ್ಕು ಕೇಂದ್ರಗಳಿಂದ ಪ್ರಕಟವಾಗುತ್ತದೆ. ಈಗಿನ ಸಂಪಾದಕರು ಪ್ರಕಾಶಕರು ವಿ ಸುಂದರೇಷನ್. ಇದು ತಂತಿ ಟ್ರಸ್ಟ್ ಸಂಸ್ಥೆಯ ಒಡೆತನದಲ್ಲಿದೆ. 
(ಕೆ.ವಿ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ